ಬಜೆಟ್

ಬಜೆಟ್ (ಆಯವ್ಯಯ):

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 256ರಲ್ಲಿ ಜಿಲ್ಲಾ ಪಂಚಾಯಿತಿಯ ಲೆಕ್ಕಪತ್ರಗಳು ಮತ್ತು ಬಜೆಟ್ ಮಂಡನೆ; ಪ್ರಕರಣ- 257ರಲ್ಲಿ ಬಜೆಟ್ ಪರಿಷ್ಕರಣೆ ಮತ್ತು ಪ್ರಕರಣ - 258ರಲ್ಲಿ ಪೂರಕ ಬಜೆಟ್ ಕುರಿತು ವಿವರಿಸಲಾಗಿದೆ.


ಜಿಲ್ಲಾ ಪಂಚಾಯಿತಿಯ ಲೆಕ್ಕಪತ್ರಗಳು ಮತ್ತು ಬಜೆಟ್ ಮಂಡನೆ( ಪ್ರಕರಣ 256):

  • 1. ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿಯು ಮುಂದಿನ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದ ವಾಸ್ತವಿಕ ಮತ್ತು ನಿರೀಕ್ಷಿತ ಜಮೆ ಮತ್ತು ವೆಚ್ಚಗಳ ಸಂಪೂರ್ಣ ಲೆಕ್ಕವನ್ನು ಸಿದ್ಧಪಡಿಸುವಂತೆ ಮಾಡತಕ್ಕದ್ದು ಮತ್ತು ಅದನ್ನು ಫೆಬ್ರವರಿ ತಿಂಗಳ ಮೊದಲನೆಯ ದಿನದ ಮತ್ತು ಮಾರ್ಚ್ ತಿಂಗಳ ಹತ್ತನೇಯ ದಿನದ ನಡುವೆ ನಡೆಸುವ ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಂದೆ, ಮುಂಬರುವ ಏಪ್ರಿಲ್ ಮೊದಲನೆಯ ದಿನದಂದು ಪ್ರಾರಂಭವಾಗುವ ಆರ್ಥಿಕ ವರ್ಷದ ಜಿಲ್ಲಾ ಪಂಚಾಯಿತಿಯ ಆದಾಯ ಮತ್ತು ವೆಚ್ಚಗಳ ಬಜೆಟ್ ಅಂದಾಜಿನ ಸಹಿತ ಮಂಡಿಸುವಂತೆ ಮಾಡತಕ್ಕದ್ದು.
  • 2. ಆ ತರುವಾಯ, ಜಿಲ್ಲಾ ಪಂಚಾಯಿತಿಯು ಮುಂಬರುವ ಏಪ್ರಿಲ್ ಮೊದಲನೆಯ ದಿನದಂದು ಪ್ರಾರಂಭವಾಗುವ ವರ್ಷದ ಬಜೆಟ್ ನಲ್ಲಿ ಒಳಗೊಂಡಿರುವ ಧನವಿನಿಯೋಗಗಳ ಮತ್ತು ಮಾರ್ಗೋಪಾಯಗಳ ಬಗ್ಗೆ ತೀರ್ಮಾನಿಸತಕ್ಕದ್ದು. ಜಿಲ್ಲಾ ಪಂಚಾಯಿತಿಯು ಅಂಗೀಕರಿಸಿದಂತಹ ಬಜೆಟ್ ಅನ್ನು ಸರ್ಕಾರವು ನಿಗದಿಪಡಿಸಬಹುದಾದಂತ ದಿನಾಂಕಕ್ಕೆ ಮುಂಚೆ ಸರ್ಕಾರಕ್ಕೆ ಕಳುಹಿಸತಕ್ಕದ್ದು.
  • 3. ಅಂತಹ ಬಜೆಟ್ ಅಂದಾಜಿನಲ್ಲಿ ಜಿಲ್ಲಾ ಪಂಚಾಯಿತಿಯ ಇತರ ವಿಷಯಗಳೊಂದಿಗೆ:-
  • A. ಈ ಅಧಿನಿಯಮದ ಅಥವಾ ಯಾವುದೇ ಇತರ ಕಾನೂನಿನ ಮೂಲಕ ಜಿಲ್ಲಾ ಪಂಚಾಯಿತಿಗೆ ವಿಧಿಸಿದ ಹಲವಾರು ಕರ್ತವ್ಯಗಳನ್ನು ನೆರವೇರಿಸಲು ಅಗತ್ಯವಾಗಬಹುದಾರಂತಹ ಸೇವೆಗಳಿಗಾಗಿ ಸಾಕಷ್ಟು ಮತ್ತು ಸೂಕ್ತ ಏರ್ಪಾಡು ಮಾಡತಕ್ಕದ್ದು.
  • B. ಜಿಲ್ಲಾ ಪಂಚಾಯಿತಿಯು ತಾನು ಮಾಡಿಕೊಂಡ ಸಾಲಗಳ ಸಂದಾಯದ ಬಗ್ಗೆ ಬದ್ಧವಾಗಿರಬಹುದಾದ ಅಸಲು ಮತ್ತು ಬಡ್ಡಿಯ ಎಲ್ಲಾ ಕಂತುಗಳು ಬಾಕಿಯಾದಗಲೆಲ್ಲಾ ಅವುಗಳ ಸಂದಾಯಕ್ಕಾಗಿ ಏರ್ಪಾಡು ಮಾಡತಕ್ಕದ್ದು.
  • C. ಸರ್ಕಾರವು ಸಾಮಾನ್ಯವಾಗಿ ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ಅಥವಾ ವಿಶೇಷವಾಗಿ ಯಾವುದೇ ಜಿಲ್ಲಾ ಪಂಚಾಯಿತಿಗಾಗಿ ಕಾಲಕಾಲಕ್ಕೆ ನಿಗದಿಪಡಿಸಬಹುದಾದಂಥ ಮೊತ್ತಕ್ಕೆ ಅಥವಾ ಆದಾಯದ ಶೇಕಡಾ ಪ್ರಮಾಣಕ್ಕೆ ಕಡಿಮೆಯಿಲ್ಲದೆ ಹಣವನ್ನು ಸದರಿ ವರ್ಷದ ಕೊನೆಯಲ್ಲಿ ಶಿಲ್ಕಾಗಿ ಉಳಿಸತಕ್ಕದ್ದು.
  • 4. ಅಂಥ ಬಜೆಟ್ ಅಂದಾಜು, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಿರುವ ನಿಯಮಗಳ ಅಥವಾ ಆದೇಶಗಳ ಉಪಬಂಧಗಳಿಗೆ ಅನುಸಾರವಾಗಿರದಿದ್ದರೆ, ಸರ್ಕಾರವು ಬಜೆಟ್ ಅನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಅಧಿನಿಯಮದ ನಿಯಮಗಳ ಅಥವಾ ಆದೇಶಗಳ ಪಾಲನೆಯಾಗುವಂತಾಗಲು ಅದನ್ನು ಮಾರ್ಪಾಡು ಮಾಡಬಹುದು. ಪರಂತು, ಒಟ್ಟು ವಾಸ್ತಾವಿಕ ವೆಚ್ಚವು ಮುಂಬರುವ ವರ್ಷದ ಜಿಲ್ಲಾ ಪಂಚಾಯಿತಿಯ ಅಂದಾಜು ವರಮಾನದ ಒಟ್ಟು ಮೊತ್ತವನ್ನು ಮತ್ತು ಪ್ರಾರಂಭದ ಶಿಲ್ಕನ್ನು ಮೀರತಕ್ಕದ್ದೆಂದು ನಿರ್ದೇಶಿಸಲು ಸರ್ಕಾರವು ಅಧಿಕಾರವನ್ನು ಹೊಂದಿರತಕ್ಕದ್ದಲ್ಲ.
  • 5. ಜಿಲ್ಲಾ ಪಂಚಾಯಿತಿಯು (1)ನೇ ಉಪ-ಪ್ರಕರಣದಲ್ಲಿ ಹೇಳಿರುವ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಬಜೆಟ್ ಅಂದಾಜನ್ನು ಅಂಗೀಕರಿಸಲು ತಪ್ಪಿದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಬಜೆಟ್ ಅಂದಾಜನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು ಮತ್ತು ಸರ್ಕಾರವು ಮಾರ್ಪಾಟಿನೊಂದಿಗೆ ಅಥವಾ ಮಾರ್ಪಾಟಿಲ್ಲದೆ ಅದನ್ನು ಅನುಮೋದಿಸತಕ್ಕದ್ದು. ಸರ್ಕಾರವು ಹಾಗೆ ಅನುಮೋದಿಸಿದ ಬಜೆಟ್ ಅನ್ನು ಸರ್ಕಾರವು ಪ್ರಮಾಣೀಕರಿಸತಕ್ಕದ್ದು ಮತ್ತು ಆ ತರುವಾಯ ಅದನ್ನು ಜಿಲ್ಲಾ ಪಂಚಾಯಿತಿಯು ಯಥಾವಿಧಿಯಾಗಿ ಅನುಮೋದಿಸಿದಂತೆ ಭಾವಿಸತಕ್ಕದ್ದು.

ಬಜೆಟ್ ಪರಿಷ್ಕರಣೆ (ಪ್ರಕರಣ 257):

ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯಿತಿಯು ಜಮೆಗಳ ಬಗ್ಗೆ ಅಥವಾ ಅದು ಕೈಗೊಳ್ಳುವ ವಿವಿಧ ಸೇವೆಗಳ ಬಗ್ಗೆ ವೆಚ್ಚ ಮಾಡಬೇಕಾದ ಮೊಬಲಗುಗಳ ಹಂಚಿಕೆ ಬಗ್ಗೆ ಬಜೆಟ್ಟಿನಲ್ಲಿ ಮಾಡಿದ ಏರ್ಪಾಡುಗಳನ್ನು ಮಾರ್ಪಾಡು ಮಾಡುವುದು ಅವಶ್ಯವೆಂದು ಕಂಡು ಬಂದರೆ ಅದು ಅಂಥ ಮಾರ್ಪಾಡನ್ನು ಮಾಡಬಹುದು. ಪರಂತು, ರಾಜ್ಯದ ಸಂಚಿತ ನಿಧಿಯಿಂದ ಸರ್ಕಾರವು ವರ್ಗಾವಣೆ ಮಾಡಿದ ಯಾವುದೇ ಅನುದಾನಗಳನ್ನು ಅಂಥ ಅನುದಾನಗಳ ವ್ಯಾಪ್ತಿಯೊಳಗೆ ಬರದ ಉದ್ದೇಶಕ್ಕಾಗಿ ಅಥವಾ ಕಾರ್ಯಕ್ರಮಕ್ಕಾಗಿ ಅಥವಾ ಯೋಜನೆಗಾಗಿ ಪಲ್ಲಟ ಮಾಡತಕ್ಕದ್ದಲ್ಲ. ಮತ್ತು ಪರಂತು, ಸರ್ಕಾರದ ಅನುಮೋದನೆ ಇಲ್ಲದೆ –

  • A. ಜಿಲ್ಲಾ ಪಂಚಾಯಿತಿಯ ಯಾವುದೇ ಅಭಿವೃದ್ಧಿ ಕಾರ್ಯಗಳಿಗಾಗಿ ಅನುಮೋದಿಸಿದ ಅನುದಾನಗಳಲ್ಲಿ ಶೇಕಡಾ ಹತ್ತಕ್ಕಿಂತ ಹೆಚ್ಚಿಗೆ ಯಾವುದೇ ಕಡಿತ ಮಾಡತಕ್ಕದ್ದಲ್ಲ
  • B. 256ನೇ ಪ್ರಕರಣದ (3)ನೇ ಉಪ-ಪ್ರಕರಣದ (ಸಿ) ಖಂಡದ ಮೇರೆಗೆ ನಿಗದಿ ಮಾಡಿದ ಮೊಬಲಗಿಗಿಂತ ಕಡಿಮೆಯಾಗಿ ಮುಕ್ತಾಯ ಶಿಲ್ಕನ್ನು ಕಡಿಮೆ ಮಾಡತಕ್ಕದ್ದಲ್ಲ.

ಪೂರಕ ಬಜೆಟ್ (ಪ್ರಕರಣ 258):

ಅವಶ್ಯಕವಾದಾಗ ಪೂರಕ ಬಜೆಟ್ ಅನ್ನು ಸಿದ್ಧಪಡಿಸಿ ಒಪ್ಪಿಸಬಹುದು. ಜಿಲ್ಲಾ ಪಂಚಾಯಿತಿಯು ಸರ್ಕಾರವು ಯಾವ ವರ್ಷಕ್ಕಾಗಿ ಬಜೆಟ್ ಮಂಜೂರಾತಿಯನ್ನು ನೀಡಿದೆಯೋ ಆ ವರ್ಷದ ಯಾವುದೇ ಕಾಲದಲ್ಲಿ ಪೂರಕ ಬಜೆಟ್ ಅನ್ನು ಸಿದ್ಧಪಡಿಸುವಂತೆ ಮಾಡಬಹುದು ಮತ್ತು ಸರ್ಕಾರಕ್ಕೆ ಒಪ್ಪಿಸಬಹುದು. ಪ್ರತಿಯೊಂದು ಅಂಥ ಪೂರಕ ಬಜೆಟ್ ಅನ್ನು ಜಿಲ್ಲಾ ಪಂಚಾಯಿತಿಯು ಪರಾಮರ್ಶಿಸತಕ್ಕದ್ದು ಮತ್ತು ಅನುಮೋದಿಸತಕ್ಕದ್ದು ಮತ್ತು ಅನುಮೋದನೆಗಾಗಿ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.


ಆಯವ್ಯಯ

1 2019-20 ನೇ ಆರ್ಥಿಕ ವರ್ಷದ ಆಯವ್ಯಯ new
2 2018-19 ನೇ ಆರ್ಥಿಕ ವರ್ಷದ ಆಯವ್ಯಯ new