ಪಂಚಾಯಿತಿಗಳ ಕಡ್ಡಾಯ ಪ್ರಕಾರ್ಯಗಳು:

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 312ರಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಅನುಸೂಚಿ 1, 2 ಮತ್ತು 3ರಲ್ಲಿರುವ ಕಾರ್ಯಚಟುವಟಿಕೆಗಳನ್ನು ನಿರ್ದಿಷ್ಟಪಡಿಸಲಾಗಿದೆ. ಈ ಪ್ರಕಾರ್ಯಗಳ ಜೊತೆಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಈ ಅಧಿನಿಯಮದ ಪ್ರಕರಣ 58-1ಎ, 58(2), 145(2), 145(3) ಮತ್ತು 184(4)ರಲ್ಲಿ ಈ ಕೆಳಗಿನ ಪ್ರಕಾರ್ಯಗಳನ್ನು ಕಡ್ಡಾಯಗೊಳಿಸಲಾಗಿದೆ.


ಗ್ರಾಮ ಪಂಚಾಯಿತಿಯ ಕಡ್ಡಾಯ ಕರ್ತವ್ಯಗಳು:

ಅನುಸೂಚಿ -1ರಲ್ಲಿ ಏನೇ ಇದ್ದರೂ, ಗ್ರಾಮ ಪಂಚಾಯಿತಿಯ ವಶದಲ್ಲಿರುವ ಗ್ರಾಮ ಪಂಚಾಯಿತಿ ನಿಧಿಯು ಅನುಮತಿಸುವಷ್ಟರಮಟ್ಟಿಗೆ ಗ್ರಾಮ ಪಂಚಾಯಿತಿಯು ಈ ಕೆಳಗಿನ ವಿಷಯಗಳ ಬಗ್ಗೆ ಪಂಚಾಯಿತಿ ಪ್ರದೇಶದೊಳಗೆ ಸೂಕ್ತವಾಗಿ ಅವಕಾಶ ಕಲ್ಪಿಸುವುದು ಕಡ್ಡಾಯವಾಗತಕ್ಕದ್ದು.

 • 1. ಪ್ರತಿ ವರ್ಷ ಶೇ 10ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಗೃಹಗಳನ್ನು ಒದಗಿಸುವುದು ಮತ್ತು ಸಾಧ್ಯವಾದಷ್ಟು ಬೇಗನೆ ಎಲ್ಲ ಮನೆಗಳಿಗೂ ಈ ಸೌಲಭ್ಯವನ್ನು ಒದಗಿಸುವ ಗುರಿ ಸಾಧಿಸುವುದು
 • 2. ಪುರುಷರು ಮತ್ತು ಮಹಿಳೆಯರಿಗಾಗಿ ಸಾಕಷ್ಟು ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು
 • 3. ಸಾಕಷ್ಟು ಸಂಪನ್ಮೂಲಗಳನ್ನು ಸೃಜಿಸಿ ತಾನೇ ಅಥವಾ ವಾರ್ಷಿಕ ಕರಾರಿನ ಮೂಲಕವಾಗಲಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ವಹಿಸುವುದು
 • 4. ಈ ಅಧಿನಿಯಮದಡಿ ವಿಧಿಸಬಹುದಾದ ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು ಮತ್ತು ವಸೂಲು ಮಾಡುವುದು
 • 5. ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು
 • 6. ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗನಿರೋಧಕ ಚುಚ್ಚು ಮದ್ದು ನೀಡುವ ಕಾರ್ಯಕ್ರಮಗಳನ್ನು ಸಾಧಿಸುವುದು
 • 7. ಜನನ ಮತ್ತು ಮರಣಗಳ ತ್ವರಿತ ನೋಂದಣಿ ಮತ್ತು ಅದನ್ನು ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು
 • 8. ನೈರ್ಮಲ್ಯ ವ್ಯವಸ್ಥೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆಯನ್ನು ಒದಗಿಸುವುದು
 • 9. ಸಾರ್ವಜನಿಕ ರಸ್ತೆಗಳ ನಿರ್ಮಾಣ, ದುರಸ್ತಿ ಮತ್ತು ನಿರ್ವಹಣೆ ಮಾಡುವುದು
 • 10. ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳ ಮೇಲಿನ ಒತ್ತುವರಿಗಳನ್ನು ತೆಗೆದುಹಾಕುವುದು
 • 11. ಸಾಕಷ್ಟು ರಸ್ತೆ ದೀಪಗಳನ್ನು ಒದಗಿಸುವುದು ಮತ್ತು ವಿದ್ಯುತ್ ಶುಲ್ಕಗಳನ್ನು ನಿಯತವಾಗಿ ಸಂದಾಯ ಮಾಡುವುದು
 • 12. ಅನೈರ್ಮಲ್ಯದ ಗುಂಡಿಗಳನ್ನು ತುಂಬಿಸುವುದು ಮತ್ತು ಗ್ರಾಮಗಳಲ್ಲಿ ಅನಾರೋಗ್ಯಕರ ಪ್ರದೇಶಗಳನ್ನು ಸ್ವಚ್ಚತೆಗೊಳಿಸುವುದು
 • 13. ಗ್ರಾಮ ಪಂಚಾಯಿತಿಯಲ್ಲಿ ನಿಹಿತವಾಗಿರುವ ಎಲ್ಲ ಸಮುದಾಯ ಆಸ್ತಿಗಳನ್ನು ನಿರ್ವಹಿಸುವುದು
 • 14. ಜನ ಗಣತಿ, ಬೆಳೆ ಗಣತಿ, ಜಾನುವಾರು ಗಣತಿ, ನಿರುದ್ಯೋಗಿಗಳ ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಗಣತಿಗೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು
 • 15. ನಿರುಪಯುಕ್ತ ವಸ್ತುಗಳನ್ನು ಮತ್ತು ಗೊಬ್ಬರವನ್ನು ರಾಶಿ ಹಾಕುವುದಕ್ಕೆ ವಾಸದ ಮನೆಗಳಿಂದ ದೂರುದಲ್ಲಿರುವ ಜಾಗಗಳನ್ನು ಪ್ರತ್ಯೇಕವಾಗಿ ಗುರುತಿಸುವುದು
 • 16. ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು
 • 17. ಗ್ರಾಮ ಪಂಚಾಯಿತಿಯು, ಪಂಚಾಯಿತಿ ಪ್ರದೇಶದಲ್ಲಿ ಪಂಚಾಯಿತಿ ಪ್ರದೇಶದ ನಿವಾಸಿಗಳ ಆರೋಗ್ಯ, ಸುರಕ್ಷತೆ, ಶಿಕ್ಷಣ, ಸುಖಸೌಖ್ಯ, ಸೌಕರ್ಯ ಅಥವಾ ಸಾಮಾಜಿಕ ಅಥವಾ ಆರ್ಥಿಕ ಉನ್ನತಿಯನ್ನು ವೃದ್ಧಿಸುವಂತ ಇತರ ಕೆಲಸಗಳನ್ನು ಅಥವಾ ಮಾರ್ಗೋಪಾಯಗಳನ್ನು ನಿರ್ವಹಿಸಲು ಸಹ ಏರ್ಪಾಟು ಮಾಡಬಹುದು

ತಾಲ್ಲೂಕು ಪಂಚಾಯಿತಿಯ ಕಡ್ಡಾಯ ಕರ್ತವ್ಯಗಳು:

ಅನುಸೂಚಿ -2ರಲ್ಲಿ ಏನೇ ಇದ್ದರೂ, ತಾಲ್ಲೂಕು ಪಂಚಾಯಿತಿಯ ವಶದಲ್ಲಿರುವ ತಾಲ್ಲೂಕು ಪಂಚಾಯಿತಿ ನಿಧಿಯು ಅನುಮತಿಸುವಷ್ಟರಮಟ್ಟಿಗೆ ತಾಲ್ಲೂಕು ಪಂಚಾಯಿತಿಯು ಈ ಕೆಳಗಿನ ವಿಷಯಗಳ ಬಗ್ಗೆ ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರದೇಶದೊಳಗೆ ಸೂಕ್ತವಾಗಿ ಅವಕಾಶ ಕಲ್ಪಿಸುವುದು ಕಡ್ಡಾಯವಾಗತಕ್ಕದ್ದು.

 • 1. ದಿನ ಒಂದಕ್ಕೆ ಪ್ರತಿ ವ್ಯಕ್ತಿಗೆ ನಲವತ್ತು ಲೀಟರುಗಳಿಗೆ ಕಡಿಮೆ ಇಲ್ಲದಂತೆ ನೀರು ಪೂರೈಸುವುದಕ್ಕಾಗಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ಮಿಸುವುದು ಮತ್ತು ಹೆಚ್ಚಿಸುವುದು
 • 2. ತಾಲ್ಲೂಕಿನೊಳಗಿನ ಗ್ರಾಮ ಪಂಚಾಯಿತಿಯ ಕಾರ್ಯ ಚಟುವಟಿಕೆಗಳು:
 • A. ಗ್ರಾಮ ಸಭೆಗಳನ್ನು ನಡೆಸುವುದು
 • B. ನೀರು ಪೂರೈಕೆ ಕಾಮಗಾರಿಗಳ ನಿರ್ವಹಣೆ
 • C. ವೈಯಕ್ತಿಕ ಮತ್ತು ಸಮುದಾಯ ಶೌಚಗೃಹವನ್ನು ನಿರ್ಮಿಸುವುದು
 • D. ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ವಸೂಲು ಮಾಡುವುದು ಮತ್ತು ಅವುಗಳ ಪರಿಷ್ಕರಣೆ
 • E. ವಿದ್ಯುತ್ ಶುಲ್ಕಗಳನ್ನು ಸಂದಾಯ ಮಾಡುವುದು
 • F. ಶಾಲೆಗಳಿಗೆ ಮಕ್ಕಳ ನೋಂದಣಿ
 • G. ರೋಗ ನಿರೋಧಕ ಚುಚ್ಚು ಮದ್ದುಗಳ ಪ್ರಗತಿ ಇವುಗಳ ಬಗ್ಗೆ ಅರ್ಧ ವಾರ್ಷಿಕ ವರದಿಯನ್ನು ಮೇಲ್ಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸುವುದು
 • 3. ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಇಡುವುದು ಮತ್ತು ಸಾಕಷ್ಟು ಪಾಠದ ಕೊಠಡಿಗಳನ್ನು ಮತ್ತು ನೀರು ಪೂರೈಕೆ ಹಾಗೂ ನೈರ್ಮಲ್ಯದ ವ್ಯವಸ್ಥೆಯನ್ನು ಒದಗಿಸುವುದು
 • 4. ಗ್ರಾಮಗಳಲ್ಲಿ ವಾಸದ ಮನೆಗಳಿಂದ ದೂರದಲ್ಲಿ ಗೊಬ್ಬರದ ಗುಂಡಿಗಳಿಗೆ ಜಾಗ ಗುರುತಿಸುವುದಕ್ಕಾಗಿ ಭೂಮಿಯನ್ನು ಅರ್ಜಿಸುವುದು

ಜಿಲ್ಲಾ ಪಂಚಾಯಿತಿಯ ಕಡ್ಡಾಯ ಕರ್ತವ್ಯಗಳು:

ಅನುಸೂಚಿ -3ರಲ್ಲಿ ಏನೇ ಇದ್ದರೂ, ಜಿಲ್ಲಾ ಪಂಚಾಯಿತಿಯ ವಶದಲ್ಲಿರುವ ಜಿಲ್ಲಾ ಪಂಚಾಯಿತಿ ನಿಧಿಯು ಅನುಮತಿಸುವಷ್ಟರಮಟ್ಟಿಗೆ ಜಿಲ್ಲಾ ಪಂಚಾಯಿತಿಯು ಈ ಕೆಳಗಿನ ವಿಷಯಗಳ ಬಗ್ಗೆ ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರದೇಶದೊಳಗೆ ಸೂಕ್ತವಾಗಿ ಅವಕಾಶ ಕಲ್ಪಿಸುವುದು ಕಡ್ಡಾಯವಾಗತಕ್ಕದ್ದು

 • 1. ಸರ್ಕಾರವು ವಿಧಿಸಲಾಗಿರುವ ಸೂತ್ರಗಳಿಗೆ ಅನುಸಾರವಾಗಿ ಐದು ವರ್ಷಗಳೊಳಗೆ ಸಂಪೂರ್ಣ ಜನತೆಯನ್ನು ಒಳಗೊಳ್ಳುವಂತೆ ಆರೋಗ್ಯ ಕೇಂದ್ರಗಳನ್ನು ಹಾಗೂ ಪ್ರಸೂತಿ ಕೇಂದ್ರಗಳನ್ನು ಸ್ಥಾಪಿಸುವುದು
 • 2. ಕುಡಿಯುವ ನೀರಿನ ಬಾವಿಗಳಲ್ಲಿ ನೀರು ಇರುವಂತೆ ನೋಡಿಕೊಳ್ಳುವುದಕ್ಕಾಗಿ ಅಂತರ್ಜಲ ಒರತೆ ಬತ್ತಿ ಹೋಗದಂತೆ ನಿರ್ಮಿತಿಗಳನ್ನು ರಚಿಸುವುದು
 • 3. ವಿಶೇಷವಾಗಿ ಕಡಿಮೆ ಮಳೆಯಾಗಿರುವ ಕಾಲದಲ್ಲಿ ಸಾಕಷ್ಟು ಕುಡಿಯುವ ನೀರು ಸಿಗುವಂತೆ ಮಾಡುವುದಕ್ಕಾಗಿ ಕುಡಿಯುವ ನೀರಿನ ಬಾವಿಗಳ ಅಕ್ಕಪಕ್ಕದಲ್ಲಿ ನೀರಾವರಿ ಕೊಳವೆ ಬಾವಿಗಳನ್ನು ಕೊರೆಯುವುದನ್ನು ತಡೆಗಟ್ಟುವುದು
 • 4. ಪ್ರತಿಯೊಂದು ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯೋದ್ಯಮದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಪ್ರತಿ ವರ್ಷ ಜಿಲ್ಲಾ ಯೋಜನೆ ಹಂಚಿಕೆಯಲ್ಲಿ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂತಹ ಶೇಕಡವಾರಿಗೆ ಕಡಿಮೆ ಇಲ್ಲದಂತೆ ಖರ್ಚು ಮಾಡುವುದು